ನಾನಕ್ -
ಸಿಖ್ ಮತದ ಪ್ರತಿಷ್ಠಾಪಕನೆಂದು ಖ್ಯಾತನಾಗಿರುವ ಮಹಾಪುರುಷ. ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಹೋರ್ ನಗರದ ಆಗ್ನೇಯಕ್ಕೆ ಸುಮಾರು 48 ಕಿಮೀ. ದೂರದಲ್ಲಿರುವ ತಳವಂಡಿ ಎಂಬ ಗ್ರಾಮದಲ್ಲಿ ಹುಟ್ಟಿದ. ಈಗ ಅದು ನಾನಕಾನ ಸಾಹೀಬ್ ಎಂದು ಪ್ರಸಿದ್ಧವಾಗಿದೆ. ನಾನಕ್ ಜನ್ಮತಳೆದ ದಿನದಲ್ಲಿ ಹಿಂದೂಧರ್ಮ ತೀರ ದುಃಸ್ಥಿತಿಯಲ್ಲಿತ್ತು. ಹೊರಗಿಂದ ಬಂದ ಮುಸ್ಲಿಂ ದಾಳಿಕಾರರು ಇಲ್ಲಿಯ ಅಸಹಾಯ ಜನತೆಯ ಮೇಲೆ ಹೇಳಲಾಗದ ಸಂಕಟವನ್ನು ಹೇರಿದ್ದರು. ಮೊಗಲ ರಾಜ ಬಾಬರ್ ಆಗ ದೆಹಲಿಯಲ್ಲಿ ಅರಸನಾಗಿದ್ದ. ನಾನಕನ ತಂದೆ ಕ್ಷತ್ರಿಯ ಜಾತಿಯ ಬೇಡೀ ಪಂಗಡದ ಬೇಸಾಯಗಾರ ಕರಣಿಕ; ಕಾಲೂ ಎಂದು ಅವನ ಹೆಸರು. ತಾಯಿ ಹೆಸರು ತೃಪ್ತಾ. ಆಗ ತಳವಂಡಿಯಲ್ಲಿ ರಾಯ ಬುಲಾರ್ ಎಂಬ ಹೆಸರಿನ ಒಬ್ಬ ಮುಸ್ಲಿಂ ಪ್ರಭುವಾಗಿದ್ದ; ಆತ ಹಿಂದೂ ಆಗಿದ್ದು ಮುಸ್ಲಿಂ ಮತಕ್ಕೆ ಸೇರಿದವ; ಧಾರ್ಮಿಕ ವಿಚಾರಗಳಲ್ಲಿ ಉದಾರಹೃದಯಿ. ದೈವಭಕ್ತನಾದ ಕಾರಣ ನಾನಕನಲ್ಲಿ ಅವನಿಗೆ ತುಂಬ ವಿಶ್ವಾಸ.

ಎಳೆಯ ನಾನಕ್ ಐದು ವರ್ಷದ ವೇಳೆಗೆ ಧಾರ್ಮಿಕ ವಿಷಯಗಳನ್ನು ಕುರಿತು ಮಾತನಾಡತೊಡಗಿದರಂತೆ; ಏಳು ವಯಸ್ಸಾದ ಮೇಲೆ ಅಕ್ಷರ ಕಲಿಯಲು ತೊಡಗಿ ಎಲ್ಲ ಅಕ್ಷರವನ್ನೂ ಒಂದೇ ದಿನದಲ್ಲಿ ಕಲಿತು ಅಕ್ಷರದಿಂದ ಆರಂಭ ಆಗುವ ಒಂದು ಪಂಕ್ತಿಮಾಲೆಯನ್ನು ಆಗಲೇ ರಚಿಸಿದ್ದನೆಂದು ಇವನ ಜೀವನ ಚರಿತ್ರೆಯಲ್ಲಿ ಹೇಳಿದೆ.
ಒಂಬತ್ತುವರ್ಷ ತುಂಬಿದಾಗ ನಾನಕನಿಗೆ ಉಪನಯನವಾಯಿತು. ಜನಿವಾರವನ್ನು ತೊಡಿಸುವ ಸಮಯದಲ್ಲಿ ನಾನಕ್ ಅದರ ವಿಚಾರವಾಗಿ ಪುರೋಹಿತ ಹರ್ದಯಾಳುವಿನೊಡನೆ ಚರ್ಚೆಗೆ ಪ್ರಾರಂಭಿಸಿ ಯಜ್ಞೋಪವೀತದ ತತ್ತ್ವವನ್ನು ಕುರಿತು ಒಂದು ಗೀತವನ್ನು ಹೇಳಿದನಂತೆ. ಅದರ ಭಾವ ಇದು `ದಯೆಯೇ ಹತ್ತಿ, ತೃಪ್ತಿಯೇ ಎಳೆ. ಸತ್ಯವೇ ಹೊಸೆದ ದಾರ, ಬ್ರಹ್ಮಗಂಟೇ ಸಂಯಮ, ಅದು ಆತ್ಮಯಜ್ಞದ ಉಪವೀತ, ಓ ಬ್ರಾಹ್ಮಣನೇ ಅದು ನಿನ್ನಲ್ಲಿದ್ದರೆ ಅದನ್ನು ತೊಡಿಸು. ಅದು ಹರಿಯದು, ಕೊಳೆಯಾಗದು, ಕಳೆದುಹೋಗದು, ಸತ್ತಾಗ ಸುಟ್ಟುಹೋಗದು, ಬಹುಶಃ ಇದೇ ಕಾಲದಲ್ಲಿ ನಾನಕ್ ರುಖಲ್-ಉಲ್-ದೀನ್ ಎಂಬ ಮುಸಲ್ಮಾನನಿಂದ ಪಾರ್ಸಿ ಭಾಷೆಯನ್ನು ಕಲಿತ. ಅವನ ಮುಂದೆ ನಾನಕ್ ಪಠಿಸಿದ ಒಂದು ಗೀತೆಯ ಎರಡು ಸಾಲುಗಳು ಹೀಗಿವೆ: `ನಮ್ರತೆ ಕಲಿ, ಅಹಂಕಾರ ಬಿಡು, ಚಂಚಲ ಹೃದಯವನ್ನು ತಡೆದಿಡು, ಓ ರುಖಲ್-ಉಲ್-ದೀನ್ ಚಿತ್ತವ ದೇವರ ಧ್ಯಾನದೊಳು ನೆಟ್ಟಿಡು. 

ನಾನಕನಿಗೆ ಹದಿನಾಲ್ಕನೆಯ ವರ್ಷದಲ್ಲಿ ಸುಲಕ್ಷಿಣಿ ಎಂಬ ಕನ್ಯೆಯೊಡನೆ ವಿವಾಹವಾಯಿತು. ಎರಡು ಮಕ್ಕಳೂ ಆದವು. ಸಂಸಾರಿಯಾದ ಮಗನನ್ನು ಒಂದು ಕಸಬಿನಲ್ಲಿ ನಿಲ್ಲಿಸಲು ತಂದೆ ಪ್ರಯತ್ನಿಸಿದ. ಜೀವನೋಪಾಯಕ್ಕಾಗಿ ಪಶುಪಾಲನೆಯ ಕಸಬನ್ನು ಅವಲಂಬಿಸೆಂದು ಒಂದು ಹಿಂಡು ಎಮ್ಮೆಯನ್ನು ಕೊಂಡುಕೊಟ್ಟ. ನಾನಕನಿಗೆ ಪಶುಪಾಲನೆಯಲ್ಲಿ ಆಸಕ್ತಿ ಇರಲಿಲ್ಲ. ಎಮ್ಮೆಗಳನ್ನು ಕಾಡಿನಲ್ಲಿ ಮೇಯಲಿಕ್ಕೆ ಬಿಟ್ಟು ದೇವರ ಧ್ಯಾನದಲ್ಲಿ ಮುಳುಗಿರುತ್ತಿದ್ದ. ಒಂದು ದಿನ ಎಮ್ಮೆಗಳು ಹತ್ತಿರದ ಹೊಲಕ್ಕೆ ನುಗ್ಗರಿ ಅಪಾರ ನಷ್ಟವನ್ನುಂಟುಮಾಡಿದವು. ಹೊಲದ ಮಾಲೀಕನು ಇತ್ತ ದೂರಿನಿಂದಾಗಿ ನಾನಕನ ತಂದೆ ತುಂಬ ಪೇಚಾಡಿ ಮಗನನ್ನು ವ್ಯವಸಾಯಕ್ಕೆ ಹಾಕಬೇಕೆಂದು ನಿರ್ಧರಿಸಿದ. ಅದನ್ನು ಕೇಳಿ ನಾನಕ್ ವ್ಯವಸಾಯದ ವಿಚಾರವಾಗಿ ಆಧ್ಯಾತ್ಮತ್ತ್ವ ಸೂಸುವ ಒಂದು ಹಾಡುಕಟ್ಟಿ ಹೇಳಿದನಂತೆ.

ಬೇಸಾಯ ಆಯಿತು. ಚಿಲ್ಲರೆ ವ್ಯಾಪಾರವನ್ನಾದರೂ ಮಾಡಿ ಸಂಪಾದಿಸು ಎಂದು ತಂದೆ ನಾನಕನಿಗೆ ಉಪದೇಶಿಸಿದಾಗ ನಾನಕ್-

`ದೈವಜ್ಞಾನವನ್ನೇ ಅಂಗಡಿಯಾಗಿ ಮಾಡಿಕೊಂಡು, ದೇವರನಾಮವನ್ನೇ ಸರಕಾಗಿ ಖಾನಿಗಳಲ್ಲಿ ತುಂಬಿ ಹಂಚಿದರೆ ಮೂರು ಮನೆ ತುಂಬುವಷ್ಟು ಲಾಭ ದೊರೆಯುತ್ತದೆ" ಎಂದು ಇನ್ನೊಂದು ಹಾಡು ಕಟ್ಟಿ ಹೇಳಿದನಂತೆ.

ಆದರೂ ತಂದೆ ನಾನಕನಿಗೆ ಸರಕು ಕೊಳ್ಳಲು ಹಣ ಕೊಟ್ಟು ಒಬ್ಬ ಸೇವಕನನ್ನು ಹಿಂದಿಟ್ಟು ಹತ್ತಿರದ ಒಂದು ಪಟ್ಟಣಕ್ಕೆ ಕಳುಹಿಸಿದ. ಸರಕನ್ನು ಕೊಂಡು ತರಲು ಹೊರಟ ಈತ ದಾರಿಯಲ್ಲಿ ಒಂದು ಫಕೀರರ ವೃಂದವನ್ನು ನೋಡಿ ಅವರ ಬಳಿಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತು ಬಿಟ್ಟ. ಆಳು ಸರಕನ್ನು ತರಲು ಹೊತ್ತಾಯಿತೆಂದು ನಾನಕನ್ನು ಎಚ್ಚರಿಸಿದಾಗ, ತನ್ನಲ್ಲಿದ್ದ ಹಣವನ್ನು ಆಳಿಗೆ ಕೊಟ್ಟು ಹತ್ತಿರದ ಪಟ್ಟಣದಿಂದ ಆಹಾರ ಪದಾರ್ಥಗಳನ್ನು ತರಿಸಿ ಅವುಗಳನ್ನೆಲ್ಲ ಫಕೀರರ ಸಮೂಹಕ್ಕೆ ಹಂಚಿಬಿಟ್ಟ.

ಆ ರಾತ್ರಿ ತುಂಬ ಹೊತ್ತಾಗಿ ಬರಿಕೈಯಲ್ಲಿ ಮನೆಗೆ ಬಂದ ಮಗನನ್ನು ನೋಡಿ ತಂದೆಗೆ ತುಂಬ ವ್ಯಥೆಯಾಗಿ `ನೀನು ಇನ್ನು ನಮ್ಮ ಪಾಲಿಗೆ ಇಲ್ಲ, ಎಲ್ಲಾದರೂ ಹಾಳಾಗಿ ಹೋಗು ಎಂದು ಹೇಳಿದ ಆಗ ತಾಯಿಯ ಕರುಳು ಕರಗಿ ಸುಲ್ತಾನಪುರದಲ್ಲಿದ್ದ ಮಗಳು-ಅಳಿಯನ ಬಳಿಗೆ ನಾನಕನನ್ನು ಕಳಿಸಿದಳು.

ನಾನಕ್ ಭಾವನ ಸಲಹೆ ಮೇರೆಗೆ ಸುಲ್ತಾನ್ ದೌಲತ್‍ಖಾನನ ಉಗ್ರಾಣದ ಗುಮಾಸ್ತೆಯ ಕೆಲಸಕ್ಕೆ ಸೇರಿದ. ಆ ಕೆಲಸವನ್ನು ಕೆಲಕಾಲ ಮೇಲಧಿಕಾರಿಗಳು ಮೆಚ್ಚುವಂತೆ ನಡೆಸಿದ. ಉಗ್ರಾಣದ ಧಾನ್ಯಗಳನ್ನು ಅಳೆಯುವಾಗ, ಬೆಲ್ಲ ಮುಂತಾದವನ್ನು ತೂಗುವಾಗ `ತೇರ ಎಂದು ಹದಿಮೂರನೆಯ ಸಂಖ್ಯೆಯನ್ನು ಉಚ್ಚರಿಸಿದಾಗ, ನಾನು ನಿನ್ನವನು, ನಾನು ನಿನ್ನವನು ಎಂದು ಹಲವು ಬಾರಿ ಹೇಳಿ ಅಳತೆಯನ್ನು ಮುಂದುವರಿಸುತ್ತಿದ್ದ. ತನಗೆ ದೊರೆತ ವೇತನದಲ್ಲಿ ಸ್ವಲ್ಪವನ್ನು ಇಟ್ಟುಕೊಂಡು ಉಳಿದುದನ್ನು ಬಡಬಗ್ಗರಿಗೆ ಹಂಚಿ ಅವರನ್ನು ಸೇರಿಸಿಕೊಂಡು ಇಡೀ ರಾತ್ರಿ ಭಜನೆಯಲ್ಲಿ ಕಾಲ ಕಳೆಯುತ್ತಿದ್ದ. ಅವರಲ್ಲಿ ರಬಕ್ ಎಂಬ ತಂತಿವಾದ್ಯವನ್ನು ನುಡಿಸುತ್ತಿದ್ದ ಮರ್ಧನನೆಂಬ ಗಾಯಕನೂ ಒಬ್ಬ. ಮುಂದೆ ಈತ ನಾನಕನ ಆಜೀವ ಶಿಷ್ಯನಾದ.
ಹೀಗೆ ಸುಲ್ತಾನಪುರದಲ್ಲಿ ಜೀವನ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆಯೆ ಒಂದು ದಿನ ಯಾರಿಗೂ ಹೇಳದೆ ಅರಣ್ಯಕ್ಕೆ ಹೋದ. ಅಲ್ಲಿ ಮೂರು ದಿನಗಳ ಕಾಲ ಧ್ಯಾನಮಗ್ನನಾಗಿದ್ದಾಗ ಈತನಿಗೆ ತಾನು ಆರಾಧಿಸುತ್ತಿದ್ದ ರೂಪರಹಿತ ದೈವದ ಸಾಕ್ಷಾತ್ಕಾರವಾಯಿತು, ಆಗ ಈತನ ಬಾಯಿಯಿಂದ "ದೇವರು ಒಬ್ಬನೆ ಆತನ ನಾಮಸತ್ಯ, ಆತ ಕರ್ತ, ವಿರೋಧರಹಿತ, ಅಜ, ಅರ್ಮತ, ಸ್ವಯಂಭೂ, ಮಹಾಮಹಿಮ, ಪ್ರಸಾದಿಗುರುವರೇಣ್ಯ" "ಆತ ಮೊದಲಲ್ಲಿ ಇದ್ದ ಪುರಾತನ. ಆತ ಈಗಲೂ ಇರುವನು ಓ ನಾನಕ್, ಅವನೆಂದೆಂದಿಗೂ ಇರುವನು" ಎಂಬ ಮಾತುಗಳು ಹೊರಬಿದ್ದವು.
ಆಗ ದೈವವಾಣಿಯೊಂದು ಕೇಳಿಸಿತು; " ಓ ನಾನಕ್ ನನ್ನ ದಯಾ ದೃಷ್ಟಿಗೆ ಪಾತ್ರನಾದ ನೀನು ಸಕಲರಿಗೂ ದಯೆ ತೋರಿಸು. ಬದಲಾಗಿ ನಾನೂ ದಯೆ ತೋರಿಸುತ್ತೇನೆ. ನನ್ನ ಹೆಸರು ದೇವ, ಆದಿಬ್ರಹ್ಮ. ನೀನು ಮಾನವರಿಗೆ ಪವಿತ್ರನಾದ ಗುರು ",
ಅದಕ್ಕೆ ನಾನಕ್ ಮರುಉತ್ತರವಾಗಿ ಈ ರೀತಿ ಹೇಳಿದ;

" ನೀನು ಸರ್ವವನ್ನು ಬಿಟ್ಟವನು, ಸರ್ವವನ್ನು ತಿಳಿದ ಸಾಗರ, ಕೇವಲ ಮೀನಾದ ನಾನು ನಿನ್ನ ಅಪಾರ ಎಲ್ಲೆಯನ್ನು ತಿಳಿಯಬಲ್ಲೆನೆ? ನಾನು ಎಲ್ಲಿ ನೋಡಿದರಲ್ಲಿ ನೀನಿರುವೆ; ನಿನ್ನಿಂದ ಬೇರೆಯಾದರೆ ನಾನು ಸಿಡಿದುಹೋಗುತ್ತೇನೆ. ನನ್ನ ದೇಹ ಆತ್ಮ ಎಲ್ಲವೂ ನಿನ್ನ ಅಧೀನ. ನೀನು ಹತ್ತಿರದಲ್ಲಿರುವೆ, ದೂರದಲ್ಲಿರುವೆ, ಮಧ್ಯದಲ್ಲೂ ಇರುವೆ. ನಿನಗೆ ಯಾವ ಆಜ್ಞೆ ಪ್ರಿಯವೋ ಅದು ಶ್ರೀರಾಗ"

ಮುಂದೆ ನಾನಕ್ ಹೆಚ್ಚಾಗಿ ಶ್ರೀರಾಗದಲ್ಲೇ ಗೀತೆಗಳನ್ನು ಕಟ್ಟಿದ. 

ಹೀಗೆ ದೇವರ ಸಾನಿಧ್ಯದಲ್ಲಿ ಮೂರು ದಿವಸಗಳ ಕಾಲ ಕಳೆದ ಅನಂತರ ನಾನಕ್ ಕಾಡಿನಿಂದ ಸುಲ್ತಾನಪುರಕ್ಕೆ ಹಿಂತಿರುಗಿದ. ತನ್ನ ಸರ್ವಸ್ವವನ್ನು ಬಡವರಿಗೆ ದಾನ ಮಾಡಿ, ಹಿಂದೂ ಜೋಗಿಗಳು ಮುಸಲ್ಮಾನ ಫಕೀರರು ಧರಿಸುವ ಎರಡು ಮಾದರಿಗಳನ್ನು ಹೋಲುವ ಬಟ್ಟೆಯನ್ನು ತೊಟ್ಟು ಬೀದಿಯಲ್ಲಿ ನಿಂತು `ಹಿಂದುವೂ ಇಲ್ಲ, ಮುಸಲ್ಮಾನನು ಇಲ್ಲ ಎಂದು ಘೋಷಿಸಿದ ಇವನನ್ನು ನೋಡಿದ ಜನ ಈತನಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದರು. ಅಲ್ಲಿಯ ಕಾಜಿಯೊಬ್ಬ ಸಾನಕ್ ಬೀದಿಯಲ್ಲಿ ನಿಂತು ಮುಸಲ್ಮಾನರನ್ನು ದೂಷಿಸುತ್ತಿರುವನೆಂದು ದೌಲತ್‍ಖಾನನಿಗೆ ದೂರು ಹೇಳಿದ. ಖಾನ್ ನಾನಕ್‍ನನ್ನು ಕರೆಸಿಕೊಂಡು ಅವನನ್ನು ತನ್ನ ಬಳಿ ಕೂಡಿಸಿಕೊಂಡು "ನಿನ್ನಂಥ ಪ್ರಾಮಾಣಿಕ ನೌಕರ ಫಕೀರನಾದದ್ದು ದುರದೃಷ್ಟ. ಅದು ಹೋಗಲಿ. ಹಿಂದುವೂ ಇಲ್ಲ, ಮುಸಲ್ಮಾನನೂ ಇಲ್ಲ ಎಂದು ಹೇಳಿದ ಮಾತಿಗೆ ಅರ್ಥವೇನು ?" ಎಂದು ಕೇಳಿದ. ಅದರ ಅರ್ಥವನ್ನು ನಾನಕ್ ಹಾಡಿನ ರೂಪದಲ್ಲಿ ಈ ಅರ್ಥ ಬರುವಂತೆ ಹೇಳಿದ.

ನಿಜವಾಗಿ ಮುಸಲ್ಮಾನರಾಗಿರುವುದು ಕಷ್ಟ, ನಿಜವಾದ ಮುಸಲ್ಮಾನ ಪ್ರಥಮತಃ ಫಕೀರನನ್ನು ಪ್ರೀತಿಸಲಿ, ಅಹಂಕಾರವನ್ನು ಧನದಾಶೆಯನ್ನು ಅರದಿಂದ ತುಕ್ಕನ್ನು ಉಜ್ಜಿ ಹಾಕಿದಂತೆ ಉಜ್ಜಿಹಾಕಲಿ. ದೇವರ ಆಜ್ಞೆಗೆ ವಿಧೇಯನಾಗಿ ಅಹಂಭಾವವನ್ನು ಅಳಿಸಿಬಿಡಲಿ, ಎಲ್ಲರಿಗೂ ದಯೆ ತೋರಿಸಲಿ."

ಖಾನ್ ಈತನ ಮಾತು ಕೇಳಿ "ಇವು ಅಲ್ಲಾವಿನ ವಾಕ್ಯಗಳೇ" ಎಂದು ನಾನಕನನ್ನು ಗೌರವಿಸಿದ.
ನಾನಕ್ ದೇವರಿಂದ ಪಡೆದ ಸಂದೇಶವನ್ನು ಭಾರತದಾದ್ಯಂತ ಪ್ರಚಾರ ಮಾಡಲು ದೇಶಪರ್ಯಟನೆ ಕೈಗೊಂಡ. ಈ ಸಮಯದಲ್ಲಿ ಮರ್ಧನನೆಂಬ ಶಿಷ್ಯ ನಾನಕನನ್ನು ನೆರಳಿನಂತೆ ಹಿಂಬಾಲಿಸಿ ನಾನಕ್ ಹಾಡುವಾಗ ಹಿಮ್ಮೇಳವಾಗಿ ರಬಾಬ್ ಎಂಬ ತಂತಿ ವಾದ್ಯವನ್ನು ನುಡಿಸುತ್ತಿದ್ದ. ಸುಲ್ತಾನ್‍ಪುರದಿಂದ ಸಯಿದ್‍ಪುರಕ್ಕೆ ಹೋದ ನಾನಕ್ ಅಲ್ಲಿ ಶೂದ್ರನಾದ ಲಾಲೋ ಎಂಬ ಬಡಗಿಯ ಆಥಿತ್ಯವನ್ನು ಸ್ವೀಕರಿಸಿದಾಗ ಕ್ಷತ್ರೀಯ ಶೂದ್ರನ ಮನೆಯಲ್ಲಿ ಊಟಮಾಡಿ ಜಾತಿಕೆಟ್ಟನೆಂದು ಆಡಿಕೊಂಡರು. ನಾನಕ್ ಅವರ ದೂಷಣೆಗೆ ಅಂಜದೆ ಜೀವನಾದ್ಯಂತ ಜಾತ್ಯಾತೀತ ಧರ್ಮವನ್ನು ಎತ್ತಿಹಿಡಿದ.

ಹೀಗೆ ಪಟ್ಟಣದಿಂದ ಪಟ್ಟಣಕ್ಕೆ ಹೋಗುತ್ತಿರಲು ಒಂದು ದಿನ ನಾನಕ್ ಹಾಗೂ ಮರ್ಧನ ಷೇಕ್ ಸಜ್ಜನ್ ಎಂಬ ಒಬ್ಬ ಪ್ರಖ್ಯಾತ ದರೋಡೆಕಾರರನ್ನು ಸಂಧಿಸಿದರು. ಆತ ಹೆದ್ದಾರಿಗೆ ಸಮೀಪದ ಅರಣ್ಯದಲ್ಲಿ ಹಿಂದೂಗಳಿಗಾಗಿ ಒಂದು ದೇವಸ್ಥಾನವನ್ನು ಮುಸ್ಲಿಮರಿಗಾಗಿ ಒಂದು ಮಸೀದಿಯನ್ನು ಕಟ್ಟಿಸಿ ಅಲ್ಲಿ ತಂಗುವ ಯಾತ್ರಿಕರಿಗೆ ಊಟದ ವ್ಯವಸ್ಥೆ ಮಾಡಿ, ಅವರುಗಳು ಅಲ್ಲಿಯೇ ಮಲಗಲು ಅನುಕೂಲ ಮಾಡಿದ್ದು ಹಾಗೆ ರಾತ್ರಿ ಮಲಗಿದವರ ಕೈಬಾಯಿಗಳನ್ನು ಕಟ್ಟಿ, ಗಂಟಲು ಹಿಸುಕಿ ಅವರ ಆಭರಣಗಳನ್ನೂ ಹಣವನ್ನೂ ಸುಲಿದುಕೊಂಡು ಅವರ ಶವಗಳನ್ನು ಒಂದು ಆಳವಾದ ಬಾವಿಯಲ್ಲಿ ಹಾಕುತ್ತಿದ್ದ. ನಾನಕನೂ ಮರ್ಧನನೂ ಇತರ ಯಾತ್ರಿಕರಂತೆ ಅಲ್ಲಿ ಊಟಮಾಡಿ ರಾತ್ರಿ ಅಲ್ಲೇ ತಂಗಿದರು. ನಾನಕ್ ರಾತ್ರಿಯ ಭಜನೆಯನ್ನು ಪ್ರಾರಂಭಿಸಿ ಒಂದು ಕೀರ್ತನೆಯಲ್ಲಿ ಜನರು ಮಾಡಬಹುದಾದ ಎಲ್ಲ ಪಾಪಗಳನ್ನೂ ವರ್ಣಿಸಿ ದೇವರ ಕ್ಷಮೆ ಬೇಡಿದ. ಆ ಕೀರ್ತನೆಯನ್ನು ಕೇಳಿದ ಸಜ್ಜನನಿಗೆ ತಾನು ಮಾಡಿದ್ದ ಒಂದೊಂದು ದುಷ್ಕøತ್ಯವು ಕಣ್ಣುಮುಂದೆ ಬಂದು ನಿಂತಂತಾಗಲು ನಾನಕನ ಕಾಲಿಗೆ ಬಿದ್ದು ತನ್ನ ಪಾಪಗಳನ್ನು ಪರಿಹಾರ ಮಾಡಬೇಕೆಂದು ಬೇಡಿಕೊಂಡ. ತಾನು ಮಾಡಿದ್ದ ಪಾಪಗಳನ್ನು ದೇವರ ಮುಂದೆ ಒಪ್ಪಿಕೊಂಡು ಅವನ ಕ್ಷಮೆಯನ್ನು ಬೇಡುವುದೊಂದೇ ಪಾಪ ಪರಿಹಾರಮಾರ್ಗವೆಂದು ನಾನಕ್ ಅವನಿಗೆ ಭೋದಿಸಿದ. ಸಜ್ಜನ್ ಹಾಗೆಯೇ ಮಾಡಿ ತನ್ನಲ್ಲಿದ್ದ ಎಲ್ಲವನ್ನೂ ಬಡವರಿಗೆ ಕೊಟ್ಟು ನಾನಕನ ಶಿಷ್ಯನಾದ. ಕೊಲೆಪಾತಕನ ಮನಸ್ಸು ಪರಿವರ್ತನೆಯಾದ ಈ ಸ್ಥಳದಲ್ಲಿ ಸಿಖ್ಖರ ಧರ್ಮಶಾಲೆ ಸ್ಥಾಪನೆಯಾಯಿತು.

ಅನಂತರ ಅಂಬಾಲ ಜಿಲ್ಲೆಯ ಕುರುಕ್ಷೇತ್ರ ಹೊಕ್ಕು ಅಲ್ಲಿಂದ ಹರಿದ್ವಾರಕ್ಕೆ ಬಂದ. ಹರಿದ್ವಾರದಲ್ಲಿ ಬ್ರಾಹ್ಮಣರು ಪೂರ್ವದಿಕ್ಕಿಗೆ ಅಭಿಮುಖವಾಗಿ ನಿಂತು ಪಿತೃಗಳಿಗೆ ತರ್ಪಣ ಬಿಡುತ್ತಿದ್ದುದನ್ನು ಕಂಡು ಈತ ಪಶ್ಚಿಮಾಭಿಮುಖವಾಗಿ ಬೊಗಸೆಯಿಂದ ನೀರನ್ನು ಚೆಲ್ಲಲು ಆರಂಭಿಸಿದ. ಅದನ್ನು ಕಂಡ ಬ್ರಾಹ್ಮಣರು ಹೀಗೇಕೆ ಸಂಪ್ರದಾಯ ವಿರುದ್ಧವಾಗಿ ನಡೆಯುತ್ತಿರುವೆ ಎಂದು ಕೇಳಿದರು. ಅದಿರಲಿ, ಪೂರ್ವದಿಕ್ಕಿಗೆ ನೀವೇಕೆ ನೀರೆರೆಯುತ್ತಿರುವಿರಿ ಎಂದು ನಾನಕ್ ಅವರನ್ನು ಪ್ರಶ್ನಿಸಿದ. ಸ್ವರ್ಗದಲ್ಲಿರುವ ತಮ್ಮ ಪಿತೃಗಳಿಗೆ ಅದನ್ನು ತರ್ಪಣವಾಗಿ ಒಪ್ಪಿಸುತ್ತಿದ್ದೇವೆ ಎಂದು ಅವರು ಹೇಳಿದರು. ಸ್ವರ್ಗ ಇಲ್ಲಿಂದ ಎಷ್ಟು ದೂರವಿದೆ ಎಂದು ಅವರನ್ನು ನಾನಕ್ ಪ್ರಶ್ನಿಸಿದ. ಅದು ಸಾವಿರಾರು ಮೈಲಿಗಳ ಆಚೆ ಇದೆ ಎಂದು ಅವರು ಹೇಳಲು, ನಾನಕ್ ನಾನು ನನ್ನ ಹೊಲಕ್ಕೆ ನೀರೆರೆಯುತ್ತಿದ್ದೇನೆ ಎಂದು ಹೇಳಿದ. ಮಂಕೇ, ಇಲ್ಲಿ ನೀನು ಎರಚಿದ ನೀರು ಎಲ್ಲೋ ಇರುವ ನಿನ್ನ ಹೊಲಕ್ಕೆ ಹೋಗುವುದು ಸಾಧ್ಯವೆ ಎಂದು ಹಾಸ್ಯ ಮಾಡಿದರು. ಸಾವಿರಾರು ಮೈಲಿಗಳ ಆಚೆ ಇರುವ ಸ್ವರ್ಗಕ್ಕೆ ನೀವು ಎರಚಿದ ನೀರು ಹೋಗುವುದಕ್ಕಿಂತ ಹತ್ತಿರದಲ್ಲಿರುವ ನನ್ನ ಹೊಲಕ್ಕೆ ನಾನೆರಚುವ ನೀರು ಹೋಗುವುದು ಹೆಚ್ಚು ಸಂಭವವಲ್ಲವೆ ಎಂದು ನಾನಕ್ ಹೇಳಿದ್ದನ್ನು ಕೇಳಿ, ಮರುತ್ತರವನ್ನು ಕೊಡದೆ ಅವರು ಮೂಕರಾದರು.

ದೇವರಿಂದ ನಾನಕ್ ಪಡೆದ ಸಂದೇಶವನ್ನು ಪ್ರಚಾರ ಮಾಡಲು ದೀರ್ಘ ಕಾಲ ದೇಶ ಸಂಚಾರವನ್ನು ಕೈಗೊಂಡ. ದೆಹಲಿ, ಬೃಂದಾವನ, ಗೋರಖ್‍ಪುರ, ವಾರಾಣಾಸಿ, ಗಯಾ, ಕಾಮರೂಪ ಮುಂತಾದ ಸ್ಥಳಗಳಿಗೆ ಹೋಗಿ ಹಲವಾರು ಪಂಡಿತರನ್ನು ವಾದದಲ್ಲಿ ಸೋಲಿಸಿ ಅವರ ಮನಸ್ಸನ್ನು ಪರಿವರ್ತಿಸಿದ. ಅವರಲ್ಲಿ ಅನೇಕ ಜನ ಈತನ ಶಿಷ್ಯರಾದರು.

ಚಕ್ರವರ್ತಿ ಬಾಬರ್ ಒಮ್ಮೆ ನಾನಕನನ್ನು ಕಂಡು ಅವನ ಸಿದ್ಧಿಯನ್ನು ಮೆಚ್ಚಿ ಅವನ ಇಷ್ಟದಂತೆ ಹಲವಾರು ಬಂದಿಗಳನ್ನು ಸೆರೆಯಿಂದ ಬಿಟ್ಟ ಎಂದು ಒಂದು ಪ್ರತೀತಿ ಇದೆ. ಬಾಬರ್ ನಾನಕನನ್ನು ಕುರಿತು, ನೀನು ಮುಸ್ಲಿಮ್ ಆಗು, ಮಹಮ್ಮದನನ್ನು ಗುರುವಾಗಿ ಪಡೆಯುವೆ ಎಂದನಂತೆ. ಅದಕ್ಕೆ ನಾನಕ್ ಮಹಮ್ಮದನಂತ ಗುರುಗಳು ನೂರಾರು ಇದ್ದಾರೆ. ದೈವ ಇರುವುದು ಒಂದೇ ಎಂದನಂತೆ. ಚಕ್ರವರ್ತಿ, ನೀನು ಏನನ್ನಾದರೂ ಕೇಳು ಕೊಡುತ್ತೇನೆ ಎಂದಾಗ ನಾನಕ್ `ಎಲ್ಲರೂ ದೇವರೆದುರಿಗೆ ನಿಂತು ಬೇಡುವವರೆ, ನಿನ್ನೆದುರಿಗೆ ಕೈ ನೀಡುವವನು ಹೆಡ್ಡ ಎಂದನಂತೆ.

ನಾನಕ್ ಸ್ವಲ್ಪ ಕಾಲಾನಂತರ ದಕ್ಷಿಣ ಭಾರತಕ್ಕೆ ಬಂದು ಸಿಂಹಳಕ್ಕೆ ಯಾತ್ರೆ ಹೋದ. ಆಮೇಲೆ ಕಾಶ್ಮೀರಕ್ಕೆ ಹೋಗಿ ಹಿಮಾಲಯದ ಸಿದ್ದ ಕ್ಷೇತ್ರಗಳನ್ನು ನೋಡಿಬಂದ. ಇದಾದ ಮೇಲೆ ಅರಬ್ಬಿ ರಾಷ್ಟ್ರಕ್ಕೆ ಹೋಗಿ ಮೆಕ್ಕ, ಮದೀನ ಕ್ಷೇತ್ರಗಳನ್ನು ನೋಡಿ ಹಿಂದಿರುಗಿದ.

ನಾನಕ್ ಐವತ್ತು ವರ್ಷಗಳ ಕಾಲ ಭಾರತದ ಒಳಗೂ ಹೊರಗೂ ಸುತ್ತಾಡಿದ. ತಾಯಿ ತಂದೆಗಳೂ ಹೆಂಡತಿಯೂ ತನ್ನನ್ನು ನೋಡಬೇಕೆಂದು ಅಪೇಕ್ಷಿಸಿದಾಗ, ತಂದೆ ತೀರಿಕೊಂಡಾಗ, ತನ್ನ ಅಂತ್ಯಕಾಲ ಸಮೀಪಿಸುವುದಕ್ಕೆ ಮುಂಚೆ-ಹೀಗೆ ಮೂರು ಸಲ ನಾನಕ್ ತಳವಂಡಿಗೆ ಹೋದ ಅಷ್ಟೆ.

ತನ್ನ ಮೆಚ್ಚಿನ ಶಿಷ್ಯ ಮರ್ಧನ ಗತಿಸಿದಾಗ ಆತನ ಮೇಲೆ ಒಂದು ಸೋಹಿಲನ್ನು ಹಾಡಿ ಆತನನ್ನು ರಾವಿ ನದಿಗೆ ಅರ್ಪಿಸಿದ. ಮರ್ಧನನ ತರುವಾಯ ಅವನ ಮಗ ನಾನಕನ ಗಾಯಕನಾದ.

ಹೀಗೆ ಕೆಲವು ವರ್ಷ ಉಪದೇಶದಲ್ಲಿ ಕಳೆದು ತನ್ನ ಶಿಷ್ಯರಲ್ಲಿ ತಾನು ತುಂಬ ಮೆಚ್ಚಿಕೊಂಡಿದ್ದ ಅಂಗದ ಎಂಬಾತನನ್ನು ತನ್ನ ಅನಂತರ ಗುರುವಾಗಿ ಇರಲು ನೇಮಿಸಿ 1538ರಲ್ಲಿ ಆಶ್ವೀಜ ಶುದ್ಧ ದಶಮಿಯ ದಿನ ನಾನಕ್ ತನ್ನ ಆತ್ಮವನ್ನು ಪರಮಾತ್ಮನಲ್ಲಿ ಬೆರೆಸಿದ. ಶಿಷ್ಯರಲ್ಲಿ ಮುಸ್ಲಿಮರಾದವರು ಗುರುವಿನ ಶವವನ್ನು ಹೂಳಬೇಕೆಂದರು. ಹಿಂದೂಗಳು ಸುಡಲು ಬಯಸಿದರು. ಸಾಯುವ ಮುನ್ನ ನಾನಕ್, ಎರಡೂ ಪಕ್ಷದವರೂ ಸಂಜೆ ಕಳೆಬರದ ಮೇಲೆ ಹೂವನ್ನಿರಿಸಿರಿ, ಬೆಳಗಾದಾಗ ಯಾವ ಪಕ್ಷದ ಹೂವು ಬಾಡದೆ ಇರುತ್ತದೋ ಆ ಪಕ್ಷದವರು ದೇಹಕ್ಕೆ ತಮ್ಮ ಸಂಪ್ರದಾಯದಂತೆ ಕ್ರಿಯೆ ನಡೆಸಲಿ ಎಂದನಂತೆ. ಎರಡೂ ಪಕ್ಷದವರೂ ಹೂವನ್ನಿಟ್ಟರು. ಬೆಳಗಾಗ ನೋಡಿದರೆ ನಾನಕನ ದೇಹವೇ ಇರಲಿಲ್ಲ. ಆಗ ಶಿಷ್ಯರು ಹಿಂದು ಶಿಷ್ಯರು ಒಂದು ಮಂದಿರವನ್ನೂ, ಮುಸ್ಲಿಮ್ ಶಿಷ್ಯರು ಒಂದು ಸಮಾಧಿಯನ್ನೂ ನಿರ್ಮಿಸಿದರು. ಪರಸ್ಪರ ವಿರೋಧವಾಗಿ ನಡೆವ ಹಿಂದೂ ಮುಸ್ಲಿಂ ಧರ್ಮಗಳ ಅನುಯಾಯಿಗಳಿಗೆ ಸಮನ್ವಯದ ದಾರಿಯೊಂದನ್ನು ನಾನಕ್ ತೋರಿಸಿದ. ಆ ದಾರಿಯಲ್ಲಿ ನಡೆದವರೇ ಸಿಖ್ ಮತದವರೆಂದು ಪ್ರಸಿದ್ಧ.

ಸಿಖ್ ಮತ ಭಾರತದಲ್ಲಿ ಹುಟ್ಟಿದ ಮತಗಳಲ್ಲಿ ಈಚಿನದು. ಕಬೀರನ ವೈಷ್ಣವ ಪಂಥ ಅದಕ್ಕೆ ಒಂದು ಮುಖ್ಯ ಆಶ್ರಯ. ಅದು ಸಾಂಪ್ರದಾಯಿಕ ಹಿಂದೂ ಮತ್ತು ಇಸ್ಲಾಂ ಎರಡು ಮತಗಳಲ್ಲಿದ್ದ ನ್ಯೂನತೆಗಳನ್ನು ತೊರೆದು ಅವೆರಡರ ಸಾರವನ್ನು ಹೀರಿಕೊಂಡಿದೆ. 
								  		(ಜಿ.ಎಚ್.; ಎಂ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ